ಕೈಗಾರಿಕಾ ಅಪಘಾತಗಳು

ಕೈಗಾರಿಕಾಕರಣದೊಂದಿಗೆ ಅಂಟಿಕೊಂಡು ಬಂದ ಸಮಸ್ಯೆಗಳಲ್ಲೊಂದು (ಇಂಡಸ್ಟ್ರಿಯಲ್ ಆಕ್ಸಿಡೆಂಟ್ಸ್), ಕೈಗಾರಿಕಾಹಾನಿ ಅಥವಾ ಕ್ಷತಿ (ಇಂಡಸ್ಟ್ರಿಯಲ್ ಇಂಜುರಿ) ಎಂದೂ ಕರೆಯುವುದುಂಟು. ಉದ್ಯೋಗದಿಂದ, ಅದರ ಅವಧಿಯಲ್ಲಿ, ಉದ್ಭವಿಸುವ ಆಕಸ್ಮಿಕ ಹಾನಿ ಅಥವಾ ಕ್ಷತಿ ಎಂಬುದು ಇಂಗ್ಲೆಂಡ್-ಅಮೆರಿಕಗಳ ಪ್ರಪ್ರಥಮ ಕಾರ್ಮಿಕ ಪರಿಹಾರ ಕಾಯಿದೆಗಳಲ್ಲಿ ನೀಡಲಾಗಿದ್ದ ವ್ಯಾಖ್ಯೆ. ಕಾರ್ಮಿಕನಿಗೆ ಉದ್ಯೋಗ ಸಂಬಂಧವಾಗಿ ಸಂಭವಿಸಿದ ಹಾನಿಗೆ ಪರಿಹಾರ ದೊರಕಬೇಕಾದರೆ ಆ ಹಾನಿ ಒಂದು ಆಕಸ್ಮಿಕದ ಫಲವಾಗಿರಬೇಕು. ಅದರಿಂದ ಅವನಿಗೆ ಪೆಟ್ಟು ಅಥವಾ ಗಾಯ ಆಗಿರಬೇಕು-ಎಂಬುದಾಗಿ ನ್ಯಾಯಾಲಯಗಳು ಈ ವ್ಯಾಖ್ಯೆಯನ್ನು ಅರ್ಥೈಸಿದುವು. ಕೈಗಾರಿಕಾಹಾನಿಯ ಈ ಪದಶಃ ಅರ್ಥದಿಂದ ಕಾರ್ಮಿಕರಿಗೆ ಬಹಳ ಅನ್ಯಾಯವೇ ಆಗುತ್ತಿತ್ತು. ಪೆಟ್ಟು ಅಥವಾ ಗಾಯವಾಗದೆಯೂ ಆಕಸ್ಮಿಕ ಸಂಭವಿಸದೆಯೂ ಕಾರ್ಮಿಕರಿಗೆ ಹಾನಿ ಅಥವಾ ಕ್ಷತಿ ಆಗಬಹುದು. ಇದು ಉದ್ಯೋಗಮೂಲವಾದ ಅಸಾಮಥ್ರ್ಯವೇ ಆದ್ದರಿಂದ ಇದನ್ನೂ ಪರಿಹಾರ ಯೋಗ್ಯವಾದ ಹಾನಿಯೆಂದೇ ಪರಿಗಣಿಸಬೇಕೆಂಬುದು ಕ್ರಮೇಣ ಬೆಳೆದುಬಂದ ವಿಚಾರಧಾರೆ. ಉದ್ಯೋಗದ ಪರಿಸ್ಥಿತಿಯಿಂದಾಗಿ ಸಂಭವಿಸುವ ಕಾಯಿಲೆಯೇ ಮುಂತಾದ ಅಸಾಮಥ್ರ್ಯಗಳನ್ನೂ ಈ ವ್ಯಾಖ್ಯೆಯಲ್ಲಿ ಸೇರಿಸಲಾಗಿದೆ.

19ನೆಯ ಶತಮಾನದ ಉತ್ತರಾರ್ಧದಿಂದ ಕೈಗಾರಿಕಾ ಅಪಘಾತಗಳ ಸಂಖ್ಯೆ ಹೆಚ್ಚಿದುದರಿಂದ ಅವುಗಳ ವಿರುದ್ಧ ರಕ್ಷಣೆಯ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಅತ್ಯಂತ ಅವಶ್ಯಕವೆಂಬ ಅಂಶ ವ್ಯಕ್ತವಾಯಿತು. ಐರೋಪ್ಯ ರಾಷ್ಟ್ರಗಳು ಅನೇಕ ಕಾಯಿದೆಗಳನ್ನು ಜಾರಿಗೆ ತಂದು ಕಾರ್ಮಿಕರಿಗೆ ಕೈಗಾರಿಕಾ ಅಪಘಾತದ ವಿರುದ್ಧ ರಕ್ಷಣೆ ನೀಡುವ ಭರವಸೆ ನೀಡಿದವು. ಬ್ರಿಟನಿನ 1802ರ ಕೆಲವು ಕಾಯಿದೆಗಳು, 1810ರ ಬೆಲ್ಜಿಯನ್ ಕಾಯಿದೆ, 1832ರ ಡೇನಿಷ್ ನಿಯಮಾವಳಿಗಳು, 1869ರ ಉತ್ತರ ಜರ್ಮನಿ ಸಂಯುಕ್ತರಾಜ್ಯ ಕೈಗಾರಿಕಾ ಸಂಹಿತೆ-ಇವು ಉದಾಹರಣೆಗಳು.

ಕೈಗಾರಿಕಾಕರಣದ ಮುನ್ನಡೆಯೊಂದಿಗೆ ಕೈಗಾರಿಕಾ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತ ಬಂದಿದೆ. ವ್ಯವಸ್ಥಿತ ಕೈಗಾರಿಕೆಗಳಲ್ಲಿ ಹೆಚ್ಚುಹೆಚ್ಚು ಯಂತ್ರಗಳ ಬಳಕೆ, ಜಟಿಲ ಉತ್ಪಾದನಕ್ರಮ ಇವು ಅಪಘಾತಗಳು ಹೆಚ್ಚಾಗುವುದಕ್ಕೆ ಮುಖ್ಯ ಕಾರಣಗಳು. ಇಂಥ ಅಪಘಾತಗಳ ವಿರುದ್ಧ ರಕ್ಷಣೆಯನ್ನೊದಗಿಸುವ ದೃಷ್ಟಿಯಿಂದ, ಕೈಗಾರಿಕಾ ಅಪಘಾತಗಳ ಕಾರಣ, ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನ ಯೂರೋಪ್ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳ 20ನೆಯ ಶತಮಾನದ ಪ್ರಾರಂಭದಲ್ಲಿ ತೀವ್ರವಾಗಿ ಬೆಳೆಯಿತು. ಹಲವಾರು ಮಾರ್ಗಗಳಿಂದ ಕೈಗಾರಿಕಾ ಅಪಘಾತಗಳನ್ನು ಕಡಿಮೆ ಮಾಡಬಹುದು, ತಪ್ಪಿಸಲೂಬಹುದು: 1 ಪ್ರತಿಯೊಂದು ಕೈಗಾರಿಕೆಯಲ್ಲೂ ಅಪಘಾತಗಳು ನಡೆಯದಂತೆ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳುವುದು. ಉದಾಹರಣೆಗೆ, ಯಂತ್ರಗಳಿಗೆ ಸರಿಯಾದ ರಕ್ಷೆ ನಿರ್ಮಿಸುವುದು, ಕಾರ್ಮಿಕರು ಯಂತ್ರಗಳಿಂದ ಎದುರಿಸಬಹುದಾದ ಅಪಾಯದ ವಿರುದ್ಧ ಅವರಿಗೆ ಸರಿಯಾದ ತರಬೇತು ನೀಡುವುದು, ಅಗ್ನಿಶಾಮಕ ಸಾಧನಗಳನ್ನು ಕೈಗಾರಿಕೆಗಳಲ್ಲಿ ಒದಗಿಸುವುದು, ಇತ್ಯಾದಿ. 2. ಹಾನಿಗೆ ಈಡಾದ ಕಾರ್ಮಿಕರಿಗೆ ಸೂಕ್ತ ಕಾರ್ಮಿಕ ಕಾಯಿದೆಗಳ ಮೂಲಕ ಪರಿಹಾರ ಒದಗಿಸುವುದು ಮತ್ತು 3. ಸುರಕ್ಷಿತವಾದ ಕೈಗಾರಿಕಾ ವಾತಾವರಣ ಕಲ್ಪಿಸುವುದು.
20ನೆಯ ಶತಮಾನದ ಆದಿಯಿಂದ ಅನೇಕ ಕೈಗಾರಿಕಾ ರಾಷ್ಟ್ರಗಳಲ್ಲಿ ಕೈಗಾರಿಕಾ ಆಕಸ್ಮಿಕಗಳ ಬಗ್ಗೆ ಕರಾರುವಾಕ್ಕಾದ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಅವುಗಳ ವಿರುದ್ಧ ರಕ್ಷಣೆ ಒದಗಿಸುವ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆದುಬಂದಿದೆ. ಕೈಗಾರಿಕಾ ಹಾನಿಯನ್ನು ನಿವಾರಿಸುವುದೂ ಅದಕ್ಕೆ ಪರಿಹಾರ ದೊರಕಿಸಿಕೊಡುವುದೂ ಅನೇಕ ರಾಷ್ಟ್ರಗಳಲ್ಲಿ ಸಾಮಾಜಿಕ ಭದ್ರತೆಯಲ್ಲಿ ಅಂತರ್ಗತವಾಗಿರುವ ವಿಚಾರಗಳಾಗಿವೆ.

ಭಾರತದಲ್ಲಿ ಕೈಗಾರಿಕಾಕರಣದ ಪ್ರಗತಿಯೊಂದಿಗೆ ಆಕಸ್ಮಿಕಗಳ ವಿರುದ್ಧ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಉತ್ಪಾದನಕ್ರಮದ ಜಟಿಲತೆಯಿಂದಾಗಿ, ಅಧಿಕ ಯಂತ್ರಗಳ ಬಳಕೆಯಿಂದಾಗಿ ಆಕಸ್ಮಿಕಗಳ ಸಂಭವ ಇರುವುದರಿಂದ ಇಲ್ಲೂ ಇದರಿಂದ ರಕ್ಷಣೆ ಹಾಗೂ ಪರಿಹಾರ ಒದಗಿಸಲು ಹಲವಾರು ಕಾಯಿದೆಗಳು ಜಾರಿಗೆ ಬಂದಿವೆ.                               (ನೋಡಿ- ಕಾರ್ಮಿಕ-ಕಾನೂನುಗಳು)

ಕೈಗಾರಿಕಾ ಅಪಘಾತಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಕಾರ್ಮಿಕರಿಗೆ ಸೂಕ್ತ ಉದ್ಯೋಗ ಪರಿಸ್ಥಿತಿಯನ್ನು ಸೃಷ್ಟಿಸಲು ಅಂತರರಾಷ್ಟ್ರೀಯ ಕಾರ್ಮಿಕ ಸಂಘ ಶ್ರಮಿಸುತ್ತದೆ. 1921ರಲ್ಲಿ ಅದು ಕೈಗಾರಿಕಾ ಆಕಸ್ಮಿಕ ರಕ್ಷಣ ವಿಭಾಗವನ್ನು ಸ್ಥಾಪಿಸಿತು. ಈ ವಿಭಾಗ ವಿಶ್ವಾದ್ಯಂತ ಎಲ್ಲ ರಾಷ್ಟ್ರಗಳಲ್ಲೂ ಕೈಗಾರಿಕಾ ಆಕಸ್ಮಿಕಗಳನ್ನು ತಪ್ಪಿಸಲು ಅಗತ್ಯವಾದ ಕ್ರಮಗಳನ್ನು ಸೂಚಿಸುವ, ಆಕಸ್ಮಿಕಗಳ ಬಗ್ಗೆ ಮುಖ್ಯವಾದ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ. ಎಲ್ಲ ರಾಷ್ಟ್ರಗಳ ಕೈಗಾರಿಕಾ ಆಕಸ್ಮಿಕಗಳ ಮಾಹಿತಿಯನ್ನು ಈ ಸಂಸ್ಥೆ ಪ್ರಕಟಿಸುತ್ತಿದೆ.  ಕೈಗಾರಿಕಾ ಆಕಸ್ಮಿಕಗಳನ್ನು ತಡೆಗಟ್ಟಲು ಅಗತ್ಯವಾದ ನಿಯಮಾವಳಿಗಳನ್ನು ಎಲ್ಲ ರಾಷ್ಟ್ರಗಳಿಗೂ ಅನ್ವಯವಾಗುವಂತೆ ರೂಪಿಸುವ ಕಾರ್ಯವನ್ನು ಅಂತರರಾಷ್ಟ್ರೀಯ ಕಾರ್ಮಿಕ ಸಂಘ ಕೈಗೊಂಡಿದೆ. 						(ಸಿ.ಕೆ.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ